ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆಯೇ ?

ಲೇಖಕರು :
ಕಟೀಲು ಸಿತ್ಲ ರಂಗನಾಥ ರಾವ್
ಶುಕ್ರವಾರ, ಏಪ್ರಿಲ್ 3 , 2015

ಇತ್ತೀಚೆಗೆ ಬಹಳ ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿರುವ ಮಾತಿದು. ಈಗ ಮೊದಲಿನ ಕಾಲದ ಹಾಗಲ್ಲ, ಇತ್ತೀಚೆಗೆ ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಾಗಿದ್ದಾರೆ. ಯುವಪೀಳಿಗೆ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನದತ್ತ ಆಕರ್ಷಿಸಲ್ಪಟ್ಟಿದೆ. ಆದರೆ ಒಂದು ಹೊಸ ಆಯಾಮದೊಂದಿಗೆ ಎಂಬ ಕೂಗು, ಘೋಷಣೆ ಬಹಳವಾಗಿ ಕೇಳಿ ಬರುತ್ತಿದೆ.

ನಿಜವಾಗಿಯೂ ಯಕ್ಷಗಾನ ಕಲೆಗೆ, ಸಮಗ್ರ ಯಕ್ಷಗಾನ ಕಲೆಯನ್ನು ಮೆಚ್ಚಿ, ಸಮಗ್ರವಾದ ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರು ಹೆಚ್ಚಿದ್ದಾರೆಯೇ? ಕೇವಲ ಯಕ್ಷಗಾನ ಪ್ರದರ್ಶನ ನಡೆಯುವ ಸ್ಥಳದಲ್ಲಿ ಇರುವ ಜನಸಂಖ್ಯೆಯನ್ನೇ ನಾವು ಯಕ್ಷಗಾನದ ಪ್ರೇಕ್ಷಕರು ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದೇವೆಯೇ?

ನನಗೆ ವೈಯಕ್ತಿಕವಾಗಿ ಅನ್ನಿಸುವಂತೆ ಸಮಗ್ರವಾದ ಯಕ್ಷಗಾನ ಕಲೆಯನ್ನು ಆಸ್ವಾದಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿಲ್ಲ. ಹೆಚ್ಚಾಗುವುದು ಬಿಡೋಣ, ಆ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆ ಹೇಗೆ:

ಸಾಮಾಜಿಕ ಜಾಲತಾಣಗಳು, ಟ್ವಿಟ್ಟರ್, ಫ಼ೇಸ್ ಬುಕ್ ಮೊದಲಾದ ಈ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದರಂತೆ ಯಕ್ಷಗಾನಕ್ಕೆ ಸಂಬಂಧಿಸಿದ ಕೆಲವು ಪೋಸ್ಟಿಂಗುಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಕೆಲವು ಛಾಯಾಪಟಗಳು, ಕೆಲವು ವೀಡಿಯೋಗಳು ಹರಿದಾಡುವುದನ್ನು ನೋಡಿ ಈ ಮೂಲಕ ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆ. ಯಕ್ಷಗಾನವನ್ನು ನೋಡಲು ಬರುವ ಪ್ರೇಕ್ಷಕರ ಸಂಖ್ಯೆ ಕೆಲವು ಪ್ರದರ್ಶನಗಳಲ್ಲಿ ಹೆಚ್ಚು ಇವೆ. ಈಗಲೂ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ 50 ಕ್ಕೂ ಹೆಚ್ಚಿನ ವೃತ್ತಿಪರ ಯಕ್ಷಗಾನ ಮೇಳಗಳಿವೆ. ಹೆಚ್ಚಿನ ಎಲ್ಲಾ ಮೇಳಗಳಿಗೂ ದಿನಾಲೂ ಆಟಗಳಿವೆ.

ಇಷ್ಟು ಮಾತ್ರವಲ್ಲದೇ ಹಲವಾರು ಸಂಘ-ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳು, ಮಕ್ಕಳ ಯಕ್ಷಗಾನ ಪ್ರದರ್ಶನಗಳು, ಮಹಿಳೆಯರ ಯಕ್ಷಗಾನ ಪ್ರದರ್ಶನಗಳು, ಹಲವಾರು ತಾಳಮದ್ದಳೆ ಕಾರ್ಯಕ್ರಮಗಳು ಅನಾಚೂನವಾಗಿ ನಡೆದುಕೊಂಡು ಬರುತ್ತಿವೆ. ಮುಂಚೂಣಿಯ ವಿಖ್ಯಾತ ಕಲಾವಿದರಿಗೆ ದಿನವೊಂದಕ್ಕೆ 3 ರಿಂದ 4 ಕಾರ್ಯಕ್ರಮಗಳಿವೆ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದಾರೆ ಮತ್ತು ಇದೀಗ ಹೆಚ್ಚು ಹೆಚ್ಚು ಜನರು ಯಕ್ಷಗಾನವನ್ನು ನೋಡುತ್ತಾರೆ.

ಯಕ್ಷಗಾನಕ್ಕೆ ನಿಜಕ್ಕೂ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆಯೇ?

ಒಂದು ಪ್ರದರ್ಶನದ ಯಶಸ್ಸಿನ ಮಾನದಂಡ ಕೇವಲ ಅಸಂಖ್ಯಾತ ಪ್ರೇಕ್ಷಕರು ಅದನ್ನು ನೋಡಿದ ಮಾತ್ರಕ್ಕೆ ಅಳೆಯುವುದಕ್ಕಾಗುವುದಿಲ್ಲ, ಅದಕ್ಕೆ ಬಹಳಷ್ಟು ಮಾನದಂಡಗಳಿವೆ. ಒಂದು ಯಕ್ಷಗಾನ ಪ್ರದರ್ಶನದ ಸ್ಥಳದಲ್ಲಿ ಇರುವ ಜನರೆಲ್ಲರೂ ಯಕ್ಷಗಾನದ ಪ್ರೇಕ್ಷಕರೇ? ವ್ಯಾಪಾರಿಯೊಬ್ಬ ವ್ಯಾಪಾರೀ ಮನೋಭಾವವನ್ನಿರಿಸಿಕೊಂಡು ತನ್ನ ಸರಕಿನ ಮಾರಾಟಕ್ಕೆ ಯಕ್ಷಗಾನ ಪ್ರದರ್ಶನದ ಸ್ಥಳದಲ್ಲಿ ಮಳಿಗೆ ಇಟ್ಟಿರುತ್ತಾನೆ. ಈ ರೀತಿಯ ಹಲವು ಮಳಿಗೆಗಳಿರಬಹುದು, ಅದನ್ನು ಹೊಂದಿಕೊಂಡು ಹಲವು ಜನರಿರಬಹುದು. ಆ ಪ್ರದರ್ಶನದ ಸ್ಥಳ ದೇವಸ್ಥಾನವೆಂದಿದ್ದರೆ, ಅಲ್ಲಿಗೆ ಬರುವ ಯಾ ಬಂದಿರುವ ಭಕ್ತಾದಿಗಳು ಒಂದಷ್ಟು ಹೊತ್ತು ಆ ಯಕ್ಷಗಾನವನ್ನು ನೋಡುತ್ತಲಿರಬಹುದು. ಇವರೆಲ್ಲಾ ಯಕ್ಷಗಾನದ ಪ್ರೇಕ್ಷಕರೇ? ಅಲ್ಲವೇ ಅಲ್ಲ. ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಬಂದಿರುವಂಥವರು, ಅವರ ಉದ್ದೇಶದ ಸಾಧನೆಯಾದೊಡನೆ ಅವರು ಅವರ ಗಮ್ಯಕ್ಕೆ ತೆರಳುತ್ತಾರೆ.

ಇನ್ನು ಅಸಂಖ್ಯಾತ ಮಂದಿ ಓರ್ವ ಕಲಾವಿದನ ಅಭಿಮಾನಿಯಾಗಿ ಆ ಕಲಾವಿದ ರಂಗವೇರುವ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಟು ಪ್ರದರ್ಶನದ ಸ್ಥಳಕ್ಕೆ ಬರುತ್ತಾರೆ. ಇತ್ತೀಚೆಗೆ ಈ ಮಾದರಿಯ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇವರಿಗೆ ಇಡಿಯ ಯಕ್ಷಗಾನ ಬೇಡ. ತಮ್ಮ ಅಭಿಮಾನಿ ಕಲಾವಿದನ ಪ್ರದರ್ಶನ ಮಾತ್ರ ಸಾಕು. ಇವರನ್ನು ಸಮಗ್ರ ಯಕ್ಷಗಾನದ ಪ್ರೇಕ್ಷಕ ಎನ್ನುವುದಕ್ಕೆ ಬರುತ್ತದೆಯೇ? ಇಲ್ಲವೇ ಇಲ್ಲ. ಇವರು ಆ ಕಲಾವಿದನ ಅಭಿಮಾನಿಗಳಷ್ಟೇ ಹೊರತು ಯಕ್ಷಗಾನದ ಪ್ರೇಕ್ಷಕರಲ್ಲ.

ಇನ್ನು ಹಲವರಿಗೆ ಯಕ್ಷಗಾನದ ಯಾವುದೋ ಒಂದು ಅಂಗದ ಬಗ್ಗೆ ಮಾತ್ರ ಅಭಿರುಚಿ ಇದ್ದು ಕೇವಲ ಅದನ್ನು ಮಾತ್ರ ನೋಡಿ ಹೋಗುತ್ತಾರೆ. ಕೆಲವರಿಗೆ ಸ್ತ್ರೀವೇಷ ಇಷ್ಟ, ಕೆಲವರಿಗೆ ಬಣ್ಣದ ವೇಷದ ಗೀಳು, ಇನ್ನು ಕೆಲವರಿಗೆ ಭಾಗವತಿಕೆ ಮಾತ್ರ ಇಷ್ಟ. ಅವರು ಆ ಸಂದರ್ಭಕ್ಕೆ ಬಂದು ಅದು ಮುಗಿದೊಡನೆ ಎದ್ದು ಹೋಗುತ್ತಾರೆ. ಈ ಪ್ರೇಕ್ಷಕರೂ ಕೂಡ ಯಕ್ಷಗಾನದ ಪ್ರೇಕ್ಷಕರಲ್ಲ.

ಇನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದರಂತೆ ಯಕ್ಷಗಾನದ ವಿವಿಧ ವೇಷದ ಛಾಯಾಪಟಗಳನ್ನು ಪೋಸ್ಟಿಸುವ ಒಂದು ದೊಡ್ಡ ವರ್ಗವೇ ಇದೆ. (ನನ್ನನ್ನೂ ಸೇರಿಸಿ ಹೇಳುತ್ತಿದ್ದೇನೆ. ನಾನೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪೋಸ್ಟಿಂಗು ಮಾಡುತ್ತೇನೆ.) ಸಮಗ್ರ ವೇಷದ ಛಾಯಾಪಟದೊಡನೆ ಆ ವೇಷಗಳ ವಿವರ, ಆ ವೇಷಧಾರಿಯ ಕಿರು ಪರಿಚಯ, ಆ ವೇಷ ಯಾವ ಪ್ರಸಂಗದಲ್ಲಿ ಬರುತ್ತದೆ ಇತ್ಯಾದಿ ಚಿಕ್ಕ ವಿವರಣೆಗಳೊಡನೆ ಪೋಸ್ಟಿಸಿದರೆ ಅದಕ್ಕೊಂದು ಸಣ್ಣ ಅರ್ಥವಾದರೂ ಇದೆ. ಆದರೆ ಸುಖಾಸುಮ್ಮನೆ ಆ ಛಾಯಾಪಟಗಳನ್ನು ಪೋಸ್ಟಿಸುವುದು, ಯಾವುದೇ ಮಾಹಿತಿ ಇರುವುದಿಲ್ಲ. ಅದರಲ್ಲೂ ಕೇವಲ ಮುಖವರ್ಣಿಕೆಯ ಛಾಯಾಪಟಗಳು, ಇನ್ನು ಕೆಲವು ಅಸಹ್ಯ ಮಾದರಿಯ ಛಾಯಾಪಟಗಳೂ ಕೂಡ ಪೋಸ್ಟ್ ಆಗುತ್ತವೆ. (ಅಸಹ್ಯ ತರಿಸುವ ಛಾಯಾಪಟಗಳೆಂದರೆ, ಓರ್ವ ವೇಷಧಾರಿ ವೇಷ ಮಾಡಿಕೊಳ್ಳುವ ಸಂದರ್ಭದ ಕೆಲವು ಕ್ಷಣಗಳು. ಅದರಲ್ಲೂ ಸ್ತ್ರೀ ವೇಷದ್ದು ಸೆರಗು ಹಾಕಿಕೊಳ್ಳುವಾಗ, ನೆರಿಗೆಯನ್ನು ಸಿಕ್ಕಿಸಿಕೊಳ್ಳುವಾಗ ತೆಗೆದು ಅದನ್ನು ಪೋಸ್ಟಿಸುವುದು). ಇವುಗಳಿಂದ ಅಂದರೆ ಇಂತಹ ಪೋಸ್ಟಿಂಗುಗಳಿಂದ ಯಕ್ಷಗಾನಕ್ಕೆ ಪ್ರಯೋಜನವಿದೆಯೇ? ಇವುಗಳನ್ನು ಗಣನೆಗೆ ತೆಗೆದುಕೊಂಡು ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆ ಎನ್ನುವುದು ಎಷ್ಟು ಸರಿ?

ಇನ್ನು ಹೆಚ್ಚಿನ ಸಮಯ ಕೆಲ ಪ್ರೇಕ್ಷಕರು ತಾವು ಸ್ವಕೀರ್ತಿ ಗಳಿಸಿಕೊಳ್ಳುವುದಕ್ಕಾಗಿ ಹಾಗೂ ಗುರುತಿಸುವಿಕೆಗಾಗಿ ಒಬ್ಬ ಪ್ರಸಿದ್ಧ ಕಲಾವಿದನೊಡನೆ ಗುರುತಿಸಿಕೊಳ್ಳುವುದು. ಇನ್ನು ತನ್ನ ಅಭಿಮಾನಿ ಕಲಾವಿದ ಎಂದು ಗುರುತಿಸುವುದರಲ್ಲೂ ಯಾವುದೇ ಮಾನದಂಡವಿಲ್ಲ. ನೂರು ಜನ ಆತನಿಗೆ ಅಭಿಮಾನಿಗಳು ಆದ ಕಾರಣ ತಾನೂ ಕೂಡ ಆತನ ಅಭಿಮಾನಿಯಾಗುವುದು. ಮತ್ತೂ ದುರಂತವೆಂದರೆ ಯಾವುದೇ ಒಬ್ಬ ಕಲಾವಿದನ ಅಭಿಮಾನಿಗಳಲ್ಲಿ ಪ್ರತಿಷ್ಠಿತರು, ಸಮಾಜದಲ್ಲಿ ಗಣ್ಯರೆಂದು ಗುರುತಿಸಲ್ಪಟ್ಟವರು ಇದ್ದಾರೆಂದರೆ ಎಲ್ಲರೂ ಆ ಕಲಾವಿದನ ಅಭಿಮಾನಿಯಾಗುವುದು. ಒಬ್ಬ ನಿಜವಾಗಿಯೂ ಉತ್ತಮ ಕಲಾವಿದ ಸ್ವಲ್ಪ ಬಡತನ ಇದೆ, ಅವನ ಅಭಿಮಾನಿ ಎಂದು ಗುರುತಿಸಿಕೊಂಡರೆ ತಮ್ಮ ಪ್ರತಿಷ್ಠೆಗೆ ಕೊರತೆ ಎಂದು ಭಾವಿಸುವವರೂ ಇದ್ದಾರೆ. ಮತ್ತು ಇದನ್ನು ನಾನು ಸ್ವತಃ ನನ್ನ ಕಿವಿಯಾರೆ ಕೇಳಿದ್ದೇನೆ ಓರ್ವ ವ್ಯಕ್ತಿಯ ಬಾಯಿಯಿಂದ.

ಪದ್ಯಾಣ ಗಣಪತಿ ಭಟ್‌, ದಿನೇಶ ಅಮ್ಮಣ್ಣಾಯ , ಪುತ್ತಿಗೆ ರಘುರಾಮ ಹೊಳ್ಳ
ಕಳೆದ ಒಂದು 15-20 ವರ್ಷಗಳ ಹಿಂದೆ ಯಕ್ಷಗಾನ ಅಳಿದೇ ಹೋಗುತ್ತಿತ್ತು ಎನ್ನುವ ಸ್ಥಿತಿ ಇತ್ತು ಆಗ ಯುವ ಕಲಾವಿದರು ಬಂದು ಹೊಸತನವನ್ನು ಕೊಟ್ಟು ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದರು ಎನ್ನುವ ಒಂದು ವರ್ಗದ ವಾದವಿದೆ. ಅದನ್ನು ನಾನು ವೈಯಕ್ತಿಕವಾಗಿ ತೀವ್ರವಾಗಿ ಖಂಡಿಸುತ್ತೇನೆ ಮತ್ತು ವಿರೋಧಿಸುತ್ತೇನೆ. ತೆಂಕುತಿಟ್ಟಿನ ವಿಚಾರ ಹೇಳುವುದಾದರೆ ಕಡತೋಕ, ಅಗರಿ, ಮಂಡೆಚ್ಚ, ಬಲಿಪ ಇವರ ವಿಜೃಂಬಣೆಯ ಕಾಲ ಮುಗಿಯುತ್ತಾ ಬಂದಂತೆ ಮುಂದಿನ ಪೀಳಿಗೆಯ ಪುತ್ತಿಗೆ, ಪದ್ಯಾಣ, ಅಮ್ಮಣ್ಣಾಯ ತಯಾರಾಗಿ ಆಗಿತ್ತು. ಮತ್ತು ಸಮರ್ಥವಾಗಿ ಯಕ್ಷಗಾನ ಕ್ಷೇತ್ರವನ್ನು ಮುನ್ನಡೆಸುತ್ತಾ ಬಂದರು ಮತ್ತು ಈಗಲೂ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಳೆಯ 15-20 ವರ್ಷಗಳ ಹಿಂದೆ ಯಕ್ಷಗಾನ ಇವರುಗಳ ಮುಂದಾಳತ್ವದಲ್ಲಿ ಇತ್ತು. ಎಲ್ಲಿ ಅಳಿದೇ ಹೋಗುತ್ತದೆ ಎನ್ನುವ ಕಾಲ ಇರಲೇ ಇಲ್ಲ ಎಂದು ಸ್ಪಷ್ಟವಾಗಿ ಬಹಳ ಧೈರ್ಯವಾಗಿ ನಾನು ಹೇಳಬಲ್ಲೆ.

15-20 ವರ್ಷಗಳ ಹಿಂದೆ ಬಲು ದೊಡ್ಡ ಆಡಿಯೋ ಮತ್ತು ಟೆಲಿವಿಶನ್ ಲೋಕದ ಕ್ರಾಂತಿಯ ಸಂದರ್ಭದಲ್ಲಿ ಯಕ್ಷಗಾನದ ಅಸ್ತಿತ್ವದ ಪ್ರಶ್ನೆಗಳಿತ್ತು. ಆಗ ಯಕ್ಷಗಾನ ಮಗ್ಗಲು ಬದಲಿಸಿದ ಸಮಯ. ಪದ್ಯಾಣ, ಪುತ್ತಿಗೆ, ಅಮ್ಮಣ್ಣಾಯ, ಪೊಲ್ಯ ಮುಂತಾದ ಮುಂಚೂಣಿಯ ಭಾಗವತರುಗಳ ಸಹಿತ ಎಲ್ಲಾ ಕಲಾವಿದರೂ ಕೂಡ ಯಕ್ಷಗಾನವನ್ನು ಆ ಕಾಲದಲ್ಲಿ ಉಳಿಸಿದರು. ಆ ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯಕ್ಷಗಾನದ ಆಡಿಯೋ ಕ್ಯಾಸೆಟ್ಟುಗಳು, ವೀಡಿಯೋ ಕ್ಯಾಸೆಟ್ಟುಗಳು ಮಾರುಕಟ್ಟೆಗೆ ಬಿಡುಗಡೆಗೊಂಡವು ಮತ್ತು ಅಭೂತಪೂರ್ವ ಯಶಸ್ಸನ್ನೂ ಗಳಿಸಿಕೊಂಡವು.

ತುಳು ಪ್ರಸಂಗಗಳು ಅದರದ್ದೇ ಆದ ಅಭೂತಪೂರ್ವ ದೇಣಿಗೆಯನ್ನೂ ಆ ಕಾಲದಲ್ಲೇ ಕೊಟ್ಟಿರುವಂತಹುದು. ಹತ್ತು ಹಲವು ತುಳು ಪ್ರಸಂಗಗಳು ದಾಖಲೆಯ ಪ್ರದರ್ಶನ ಕಂಡವು. ಅದೇ ರೀತಿಯಲ್ಲಿ ಕಾಳಿಂಗ ನಾವುಡರ ಹಲವಾರು ಪ್ರಸಂಗಗಳೂ ಕೂಡ ಅಭೂತಪೂರ್ವ ಯಶಸ್ಸನ್ನು ಗಳಿಸಿದವು. ಧಾರೇಶ್ವರರು, ಕೊಳಗಿಯವರು, ಹೇರಂಜಾಲು, ವಿದ್ವಾನ್ ಮುಂತಾಗಿ ಬಹಳಷ್ಟು ಜನ ಬಡಗಿನಲ್ಲಿ ಯಕ್ಷಗಾನವನ್ನು ಸರ್ವ ಕಲಾವಿದರಾದಿಯಾಗಿ ಆಧರಿಸಿದರು. ಆಗಿನ ಕಾಲದಲ್ಲಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರು ವಿಮಾನದಲ್ಲಿ ಆಟಕ್ಕೆ ಪದ ಹೇಳಲು ತರಿಸುತ್ತಿದ್ದರು. ಮುಮ್ಮೇಳದಲ್ಲಿ ಸೂರಿಕುಮೇರಿ, ಉಬ್ಬರಡ್ಕ, ಶ್ರೀಧರ ಭಂಡಾರಿ, ಕುಂಬ್ಳೆ ಶ್ರೀಧರ ರಾವ್, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಜಗದಾಭಿರಾಮ ಪಡುಬಿದ್ರೆ, ಸುಣ್ಣಂಬಳ, ಸುಬ್ರಾಯ ಹೊಳ್ಳ, ಇನ್ನೂ ಹಲವಾರು ಕಲಾವಿದರು ಒಳ್ಳೆಯ ಉಚ್ಛ್ರಾಯ ಘಟ್ಟದಲ್ಲಿ ಇದ್ದರು. ಇನ್ನು ಬಡಗಿನಲ್ಲಿ ಚಿಟ್ಟಾಣಿ, ಗೋಡೆ, ಕೊಂಡದಕುಳಿ, ಯಾಜಿ, ನೀಲ್ಕೋಡು, ಯಲಗುಪ್ಪ, ಮುಂತಾಗಿ ಬಹಳಷ್ಟು ಮುಂಚೂಣಿಯ ಕಲಾವಿದರುಗಳಿದ್ದರು.

ಚಿಟ್ಟಾಣಿ ರಾಮಚ೦ದ್ರ ಹೆಗಡೆ
ಆ ಕಾಲದಲ್ಲಿ ತಾಳಮದ್ದಳೆ ಕ್ಷೇತ್ರವೂ ಮುಂಚೂಣಿಯಲ್ಲಿತ್ತು. ಶೇಣಿ, ಸಾಮಗರು ಇನ್ನೂ ಹಲವು ಜನರ ಅರ್ಥವನ್ನು ಕೇಳುವುದಕ್ಕಾಗಿ ಜನ ಸೇರುತ್ತಿದ್ದರು. ಒಂದು ಉದಾಹರಣೆಯ ಮೂಲಕ ಹೇಳುವುದಿದ್ದರೆ ಸುರತ್ಕಲ್ಲು ಮಹಾಮ್ಮಾಯೀ ಮೇಳದ ಶಂಭು ವೀರ ಕಲ್ಕುಡ ಪ್ರಸಂಗವನ್ನು ನೂರಾರು ಬಾರಿ ನೋಡಿದ ಮಹನೀಯರೊಬ್ಬರು ಹೇಳುತ್ತಾರೆ. ಹಲವು ಬಾರಿ ಆ ಪ್ರಸಂಗವನ್ನು ನೋಡಿದ್ದರೂ 10.30ಕ್ಕೆ ಮೂತ್ರಶಂಕೆ ಪೂರೈಸಿ ಆಟ ನೋಡಲು ಕುಳಿತರೆ ಮಧ್ಯೆ ಅದಕ್ಕೂ ಏಳುತ್ತಿರಲಿಲ್ಲ, ಯಾಕೆಂದರೆ ಒಂದೊಂದು ದೃಶ್ಯವೂ ಅಷ್ಟು ಅದ್ಭುತವಾಗಿರುತ್ತಿತ್ತು. ಕಳೆದುಕೊಳ್ಳುವ ಇಚ್ಛೆ ಆಗದೇ ಆಟ ಮುಗಿದ ಮೇಲೆಯೇ ಮೂತ್ರಶಂಕೆಗಾದರೂ ಏಳುತ್ತಿದ್ದುದು ಎಂಬುದಾಗಿ. ಆಗ ಒಬ್ಬ ಕಲಾವಿದನ ಅಭಿಮಾನಿ ಆಟ ನೋಡುತ್ತಿದ್ದುದು ಅಲ್ಲ. ಯಕ್ಷಗಾನದ ಅಭಿಮಾನಿ ನೋಡುತ್ತಿದ್ದುದು. ಇಂತಹ ಪ್ರೇಕ್ಷಕರು ಹೆಚ್ಚಬೇಕು.

15-20 ವರ್ಷಗಳ ಹಿಂದೆ ಬಹಳಷ್ಟು ಅನ್ವೇಷಣೆಗಳಾದವು. ದ್ವಂದ್ವ ಭಾಗವತಿಕೆಯ ಉಗಮ ಆಗಿದ್ದೇ ಆಗ. ಕಾಳಿಂಗ ನಾವೂಡರು ಮತ್ತು ಪೊಲ್ಯ, ನಾವಡರು ಮತ್ತು ಪದ್ಯಾಣ ಇವರುಗಳ ದ್ವಂದ್ವ ಲೆಖ್ಖಮಿತಿಯಿಲ್ಲದಷ್ಟು ಆಗುತ್ತಿತ್ತು. ಇತ್ತೀಚೆಗೆ ಏನು ಅನ್ವೇಷಣೆಗಳಾಗುತ್ತಿವೆ? ಏನು ಹೊಸತು ಬರುತ್ತಿದೆ. ಹೊಸತೆಂದು ಗಿಮಿಕ್ಕುಗಳ ಸರಮಾಲೆ ಸೃಷ್ಟಿಯಾಗುತ್ತಿದೆ. ಈಗ ಸಂಖ್ಯೆಯಲ್ಲಿ ಹೆಚ್ಚಿರುವ ಪ್ರೇಕ್ಷಕರು ಈ ಗಿಮಿಕ್ಕಿನ ಪ್ರೇಕ್ಷಕರು. ಅದು ನಿಂತರೆ ಅವರೂ ಇಲ್ಲ.

ರಾತ್ರೆ ಇಡೀ ಆಟ ಆಗುವ ಕಟೀಲು, ಪೆರ್ಮುದೆ ಮುಂತಾದ ಹಳ್ಳೀ ಪ್ರದೇಶಗಳಲ್ಲಿ ಒಂದು ವೇಳೆ ಈಗಿರುವ 15-20 ಪ್ರೇಕ್ಷಕರ ಬದಲಾಗಿ 100 ಇದ್ದಿದ್ದರೆ ಆಗ ಯಕ್ಷಗಾನಕ್ಕೆ ಪ್ರೇಕ್ಷಕರು ಹೆಚ್ಚಿದ್ದಾರೆ ಎನ್ನಬಹುದು. ಆದರೆ ಈ ಉದಾಹರಣೆಯನ್ನು ಕೊಟ್ಟು ಅಂದರೆ ರಾತ್ರೆ ಇಡೀ ಆಟಕ್ಕೆ 15-20 ಜನ ಮಾತ್ರ ಇರುವುದು ಎಂದು ಕಾಲಮಿತಿಗೆ ಇಳಿಸಿರುವುದು ಪ್ರೇಕ್ಷಕರ ಕೊರತೆ ಅಲ್ಲವೇ? ಮತ್ತೆ ಈಗ ಯಕ್ಷಗಾನಕ್ಕೆ ಒಮ್ಮೆಲೇ ಪ್ರೇಕ್ಷಕರು ಹೆಚ್ಚಿದ್ದು ಯಾವಾಗ?

ಸಮಗ್ರ ಯಕ್ಷಗಾನದತ್ತ ಪ್ರೇಕ್ಷಕರನ್ನು ಸೆಳೆದದ್ದು ಇಡಿಯ ಯಕ್ಷಗಾನ ಕ್ಷೇತ್ರದಲ್ಲಿ ಕೇವಲ ಕೆಲವೇ ಮಂದಿ ಕಳೆದ 50 ವರ್ಷಗಳ ಇತಿಹಾಸ ಗಮನಿಸುವುದಾದರೆ. ಅವರೆಂದರೆ ಕಡತೋಕ ಮಂಜುನಾಥ ಭಾಗವತರು ಮತ್ತು ಗುಂಡ್ಮಿ ಕಾಳಿಂಗ ನಾವುಡರು. ಈ ಈರ್ವರೂ ಕೂಡ ಕೇವಲ ತಮ್ಮ ಅಭಿಮಾನಿ ವರ್ಗದ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲ, ಸಮಗ್ರ ಯಕ್ಷಗಾನಕ್ಕೇ ಪ್ರೇಕ್ಷಕರನ್ನು ಸೆಳೆದವರು. ಇವರ ಅದ್ಭುತವಾದ ಭಾಗವತಿಕೆ, ಸಮರ್ಥ ರಂಗ ನಿರ್ದೇಶನ ಇವುಗಳ ಜತೆಗೆ ಅದ್ಭುತವೆನ್ನಿಸುವ ಕಥಾನಕಗಳು, ಅದರ ನಿರೂಪಣೆ, ಮತ್ತು ಕಲಾವಿದರ ಸಾಮರ್ಥ್ಯವನ್ನು ಅರಿತುಕೊಂಡು ಅವರ ಪ್ರತಿಭೆಯನ್ನು ಹೊರತೆಗೆಸುತ್ತಿದ್ದ ರೀತಿ ಅನನ್ಯ.

ಅಂದರೆ ಈಗ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆಯಾದರೂ ನಿಜವಾದ ಯಕ್ಷಗಾನದ ಅಭಿಮಾನಿ ಮತ್ತು ಪ್ರೇಕ್ಷಕ ಈಗಲೂ ಕೇವಲ 20 ಪ್ರತಿಶತವೇ ಇರುವುದು. ಬಾಕೆ ಎಲ್ಲವರೂ ಕೂಡ ಒಬ್ಬ ಕಲಾವಿದನ ಅಭಿಮಾನಿಗಳು, ಕೆಲವು ವೇಷವೈವಿಧ್ಯದ ಅಭಿಮಾನಿಗಳು, ಇನ್ನು ಕೆಲವರು ಕಲಾವಿದರ ಗಿಮಿಕಕ್ಕುಗಳಿಂದ ಆಕರ್ಷಿತರಾದವರು. ಇದೆಲ್ಲ ಇಲ್ಲವೆಂದರೆ ಈ ಪ್ರೇಕ್ಷಕರೂ ಇರುವುದಿಲ್ಲ. ಯಕ್ಷಗಾನದ ಪ್ರೇಕ್ಷಕರ ನಿಜವಾದ ಸಂಖ್ಯೆ ತಿಳಿಯಬೇಕೆಂದರೆ ಇಡೀ ರಾತ್ರೆಯ ಆಟವನ್ನು ನೋಡಬೇಕು ಅದೂ ಕಟೀಲು ಕ್ಷೇತ್ರ ಅಥವಾ ಪೆರ್ಮುದೆ ಮುಂತಾದ ಹಳ್ಳಿಗಳಲ್ಲಿ ನೋಡಬೇಕು. ಎಂಥಾ ಅದ್ಭುತ ಕಲಾವಿದರ ಪ್ರದರ್ಶನವಾದರೂ ಬೆಳಗ್ಗಿನವರೆಗೆ 15 ರಿಂದ 20 ಜನ ಇರುತ್ತಾರೆ. ಅವರೇ ನಿಜವಾದ ಯಕ್ಷಗಾನದ ಪ್ರೇಕ್ಷಕರು. ಒಂದು ಯಕ್ಷಗಾನದ ಇಡಿಯ ಪ್ರದರ್ಶನವನ್ನು ನೋಡುವವನೇ ಯಕ್ಷಗಾನದ ನೈಜ ಪ್ರೇಕ್ಷಕ. ಈ ಸಂಖ್ಯೆ ಹೆಚ್ಚಾಗಿದೆಯೇ?



ಕೃಪೆ : http://rangasyaksharanga.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
akarsh j shetty(6/21/2015)
yakshaganakke ondu eradu varshadalli prekshakaru hecchagiddar .ekendare hosanagara,kateelinantaha melagala atavannu nodalu jana anya urininda hecchina sankhyeyalli baralarambhisiddare.adare vimarshe madidare prekshakara sankhye kadimeye




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ